ವೇಮನ
	ಸು. 15-16ನೆಯ ಶತಮಾನ. ತೆಲುಗಿನ ಸಂತಕವಿ.  ಕನ್ನಡದ ಸರ್ವಜ್ಞ, ತಮಿಳಿನ ತಿರುವಳ್ಳುವರ್ ಮುಂತಾದ ದಾರ್ಶನಿಕ ಕವಿಗಳೊಂದಿಗೆ ಇವನನ್ನು ಹೋಲಿಸುವುದುಂಟು. ಇವನು ತನ್ನ ಕಾಲ ದೇಶ ವಿಚಾರಗಳ ಕುರಿತು ಪ್ರತ್ಯೇಕವಾಗಿ ಏನನ್ನೂ ಹೇಳಿಕೊಂಡಿಲ್ಲ.  ಇವನ ಪದ್ಯ ಹಾಗೂ ಭಾಷಾ ಶೈಲಿಗಳ ಮೇಲೆ ಇವನು ರಾಯಲಸೀಮೆಗೆ ಸೇರಿದವನೆಂದು ಕೆಲ ವಿದ್ವಾಂಸರ ಅಭಿಪ್ರಾಯ. ರಾಯಲಸೀಮೆ ಕರ್ನಾಟಕ-ಆಂಧ್ರದ ಗಡಿ ಸೀಮೆ.  ಕರ್ನಾಟಕದ ಗಡಿ ಪ್ರದೇಶಗಳಲ್ಲಿ ಇವನ ಪದ್ಯಗಳು ಹೇರಳವಾಗಿ ಬಳಕೆಯಲ್ಲಿರುವುದೂ ಇವನು ರಾಯಲಸೀಮೆಯವನಿರಬಹುದೆಂಬ  ವಾದಕ್ಕೆ ಪುಷ್ಟಿಕೊಡುತ್ತದೆ.  

	ತೆಲುಗಿನಲ್ಲಿ ವೇಮು ಎಂದರೆ ಬೇವು. ಬೇವಿನ ಮರವನ್ನು ಸೂಚಿಸುವ ಗ್ರಾಮದೇವತೆಗಳಿಂದಲೋ ಯೋಗಿಗಳ ಹೆಸರಿನಿಂದಲೋ ವೇಮನನಿಗೆ ಈ ಹೆಸರು ಬಂದಿರಬಹುದು. ತಿನ್ನುತ್ತಾ ತಿನ್ನುತ್ತಾ ಬೇವು ಕೂಡ ಸಿಹಿಯಾಗುತ್ತದೆ ಎಂಬ ಅರ್ಥದಲ್ಲಿ ತಿನಗ ತಿನಗ ವೇಮು ತೀಯನಗುನು ಎಂದು ಹೇಳಿದ ಮಾತು ಈತನಿಗೇ ಹೇಳಿದಂತಿದೆ ಎಂಬ ಅಭಿಪ್ರಾಯವೂ ಮೆಚ್ಚುಗೆಯ ರೂಪದಲ್ಲಿದೆ.

	ಈತನ ಕಾಲದ ಕುರಿತಾಗಿ ವಿದ್ವಾಂಸರು ಒಮ್ಮತಕ್ಕೆ ಬರಲಾಗಿಲ್ಲ.  ಏಕೆಂದರೆ ಈ ಅಂಶದಲ್ಲೂ ಈತ ಖಚಿತ ಮಾಹಿತಿಗಳನ್ನು ಬಿಟ್ಟುಹೋಗಿಲ್ಲ. ಇವನೂ ಕನ್ನಡದ ಸರ್ವಜ್ಞನಂತೆ ದೇಶದಿಂದ ದೇಶಕ್ಕೆ ಸುತ್ತುತ್ತ ಬಂದ ಪರಿವ್ರಾಜಕ ಕವಿ. ಸರ್ವಜ್ಞನ ಸಮಕಾಲೀನನೆಂದು ಹೇಳುವುದಿದೆ. 16ನೆಯ ಶತಮಾನಕ್ಕೆ ಸೇರಿದವನೆಂದೂ 18ನೆಯ ಶತಮಾನಕ್ಕೆ ಸೇರಿದವನೆಂದೂ ಅಭಿಪ್ರಾಯಗಳಿವೆ.

	ಈತನ ಎಲ್ಲ ಪದ್ಯಗಳು ವಿಶ್ವದಾಭಿರಾಮ ವಿನುರ ವೇಮ ಎಂದು ಮುಕ್ತಾಯವಾಗುತ್ತವೆ. ಇವನು ಒಕ್ಕಲಿಗನೆಂದು ಹೇಳುವಲ್ಲಿ ಇವನಿಂದ ಕಾಪು ಜಾತಿಗೆ (ಒಕ್ಕಲಿಗ) ಕೀರ್ತಿ ಬಂದಿತೆಂಬ ಐತಿಹ್ಯವಿದೆ. ಇವನನ್ನು ಕೆಲವು ಸಮಕಾಲೀನರು ಹಾಗೂ ಇತರ ಕವಿಗಳು ವೇಮಪತಿ, ವೇವನೃಪಾಲಶೇಖರ ಎಂದು ಸಂಬೋಧಿಸಿರುವುದರಿಂದ ಇವನು ರಾಜಮನೆತನಕ್ಕೆ ಸೇರಿರಬಹುದೆಂಬ ಅಭಿಪ್ರಾಯವೂ ಇದೆ. ಒಂದು ಐತಿಹ್ಯದ ಪ್ರಕಾರ ಈತ ಅನವೇಮಾರೆಡ್ಡಿಯೆಂಬ ಅರಸನ ತಮ್ಮ.  ಅತಿಯಾದ ಭೋಗಜೀವನದ ಅಸಹ್ಯದಿಂದ ಈತ ಯೋಗಿಯಾದ. ಈತ ಐಹಿಕ ಸುಖ ಭೋಗಾಕಾಂಕ್ಷಿಯಾಗಿ ಬದುಕಿದವನಲ್ಲ. ಲೌಕಿಕ ಜೀವನದ ನೀತಿ, ನಿಯಮ, ಆಚಾರ-ವಿಚಾರ ಇತ್ಯಾದಿಗಳನ್ನು ತೆರೆದ ಕಣ್ಣಿನಿಂದ ವೀಕ್ಷಿಸಿ ವಿಶ್ಲೇಷಿಸಿದವನು. ಅದನ್ನು ಪ್ರಪಂಚಕ್ಕೆ ತಿಳಿಯಪಡಿಸಬೇಕೆಂಬ ಶ್ರದ್ಧೆಯೇ ಇವನ ಪದ್ಯಗಳಲ್ಲಿರುವ ಸಾಮಾಜಿಕ ವಿಡಂಬನೆಗಳಿಗೆ, ಟೀಕೆಗಳಿಗೆ ಹಿನ್ನೆಲೆಯಾಯಿತು.

	ಈತನ ಕರ್ತೃತ್ವ ಶಕ್ತಿ, ಅವಲೋಕನಾ ಸಾಮಥ್ರ್ಯ ಕುತೂಹಲಕರವಾದದ್ದು. ಇವನ ಸ್ವಂತ ವಿಚಾರಗಳ ಕುರಿತು ವಿವರಗಳನ್ನೇನನ್ನೂ ನೀಡದಿದ್ದರೂ ಸಮಾಜದ ರೀತಿನೀತಿ ಓರೆಕೋರೆಗಳನ್ನು, ಮನುಷ್ಯರು ಅನುಸರಿಸ ಬೇಕಾದ ಮಹತ್ತ್ವದ ಗುಣಗಳನ್ನು ವಿಶ್ಲೇಷಿಸುತ್ತಾನೆ. ಕೋಪತಾಪಗಳನ್ನು ವರ್ಜಿಸಿ, ದುಷ್ಟರನ್ನು ಅನುಕಂಪದಿಂದ ಆದರಿಸಿ ತಿದ್ದಬೇಕೆಂಬುದು ಇವನ ಅಭಿಮತ. ದುರ್ಜನನು ಖಂಡಿಸತಕ್ಕವನೇ ಆದರೂ ಅವನನ್ನು ಶಿಕ್ಷಿಸುವುದಕ್ಕಿಂತ ಆದರಿಸಿದಾಗ ಉಂಟಾಗುವ ಪರಿಣಾಮ ಇತ್ಯಾತ್ಮಕ ವಾದದ್ದೆನ್ನುತ್ತಾನೆ. ಇಳೆಯಲ್ಲಿ ತಪ್ಪಿಲ್ಲದವರು ಯಾರು, ತಪ್ಪನ್ನೇ ಎಣಿಸುವವರಿಗೆ ತಮ್ಮ ತಪ್ಪು ತಿಳಿಯಲು ಸಮಯವಾದರೂ ಎಲ್ಲಿ, ಈತನ ವಾದ. ಲೋಕದಲ್ಲಿ ಸಜ್ಜನರನ್ನು ಗುರುತಿಸುವುದು ಹೇಗೆ? ಅಲ್ಪ ಎಂಬುದು ಯಾವಾಗಲೂ ಹೆಮ್ಮೆಯಿಂದ ಮಾತನಾಡುತ್ತಾನೆ. ಸಜ್ಜನ ಮೆಲ್ಲನೆ ತಂಪುಂಟಾಗುವಂತೆ ಮಾತನಾಡುತ್ತಾನೆ. ಕಂಚು ಮೊಳಗುವ ಶಬ್ದವೇ ಬೇರೆ, ಚಿನ್ನದ ಮೊಳಗೇ ಬೇರೆ. ಶ್ರೇಷ್ಠತೆ ಯೆಂಬುದು ಅದರ ಮೌಲ್ಯದಿಂದ ನಿರ್ಧಾರವಾಗಬೇಕು. ಥಳುಕಿನ ಕಲ್ಲು ಬಹಳಷ್ಟು ಇರುವುದಕ್ಕಿಂತ ನೀಟಾದ ನೀಲಮಣಿ ಒಂದೇ ಇದ್ದರೂ ಸಾಕು. ಶ್ರೇಷ್ಠವಾದದ್ದು ಎಂದಿಗೂ ತನ್ನನ್ನು ಉಬ್ಬಿಸಿ ತೋರಿ ಕೊಳ್ಳುವುದಿಲ್ಲ. ಬೆಟ್ಟವೂ ಕನ್ನಡಿಯಲ್ಲಿ ಸಣ್ಣದಾಗಿ ಕಾಣುವುದಿಲ್ಲವೆ? ಹೇಡಿಯಾದವನು ಅತ್ತಿಯ ಹಣ್ಣಂತೆ.ಹೀಗೆ ಸಜ್ಜನಿಕೆಯ ಕುರಿತಂತೆ, ಮೌಲ್ಯಗಳ ಕುರಿತಂತೆ ಮಾತನಾಡಿದ್ದಾನೆ

	ಈತನ ವಿಚಾರವೂ ಬಲು ತೀಕ್ಷ್ಣ. ದುರಾಚಾರ, ದುಷ್ಟತನ, ಮೂಢನಂಬಿಕೆ, ಮೋಸ, ಕುಲಮತಗಳ ಕುರಿತ ಅಂಧಶ್ರದ್ಧೆಗಳನ್ನು ಖಂಡಿಸುತ್ತಾನೆ. ಯೋಗಿಗಳು ಸಮಾಜಕ್ಕೆ ಆದರ್ಶಪ್ರಾಯರು.  ಅವರೇ ಕೋಪ, ಕಪಟ, ಮೋಸಗಳನ್ನು ಆಶ್ರಯಿಸಿದರೆ ಇತರರಿಗೆ ಯಾರು ಆದರ್ಶ ಎಂದು ಪ್ರಶ್ನಿಸುತ್ತ, “ಕಾಯಿ, ಹಣ್ಣು ತಿಂದು ಕಾಷಾಯ ತೊಟ್ಟು ತಲೆ ಬೋಳಿಸಿಕೊಳ್ಳುವ” ಆಚರಣೆ ಏಕೆಂದು ಅರ್ಥ ಮಾಡಿಕೊಳ್ಳಬೇಕು. ತಲೆ ಬೋಳಾದರೆ ಭಾವನೆಗಳು ಬೋಳೇ? ಆಚರಣೆ ಆಚರಣೆಗಾಗಿ ಅಲ್ಲ. ಅದು ಸಮಾಜದಲ್ಲಿ ನಗೆಪಾಟಲಿನ ವಿಷಯವಾಗಬಾರದು ಎಂದು ಹಿತ ನುಡಿಯುತ್ತಾನೆ. ಹಾಗೇ, ಹಣವಿಲ್ಲದವರು ಜಾತಿ ಹೀನರಲ್ಲ. ಜಾತಿಯ ಪ್ರಶ್ನೆಯೇ ಅಸಹ್ಯ. ಅದರಲ್ಲೂ ಹಣದ ಜಾತಿಯ ವಿಚಾರ ಇನ್ನೂ ಅಸಹ್ಯ ಎನ್ನುತ್ತಾನೆ.

	ಇವನ ಎಷ್ಟೋ ಪದ್ಯಗಳು ಕನ್ನಡದ ಸರ್ವಜ್ಞನನ್ನು ನೆನಪಿಸುತ್ತವೆ.  ದೇವರು, ಭಕ್ತಿ, ಮೂಢನಂಬಿಕೆ, ನಡೆವಳಿಕೆ, ಸಜ್ಜನಿಕೆ, ಜೀವನಮೌಲ್ಯ ಗಳನ್ನು ಕುರಿತ ನಂಬಿಕೆ ಎಲ್ಲ ಒಂದೇ ರೀತಿ ಇವೆ.  ಅಷ್ಟೇ ಅಲ್ಲ ಭಾರತದ ಇತರ ಸಂತ ಕವಿಗಳಾದ ತಿರುವಳ್ಳುವರ್, ಕಬೀರದಾಸ, ಜ್ಞಾನದೇವ ಮುಂತಾದವರ ಮಾತುಗಳೂ ಈತನ ಆಲೋಚನೆಗಳೂ ಒಂದೇ ರೀತಿ ಇರುವುದನ್ನು ಗಮನಿಸಬಹುದು.
											(ಜಿ.ಎನ್.ಎಸ್.)
   *

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ